ಚೀನಾದೊಂದಿಗೆ ತಾಲಿಬಾನ್ ಸ್ನೇಹ! ಬೀಜಿಂಗ್ ನಮ್ಮ "ಫ್ರೆಂಡ್' ಎಂದ ಅಫ್ಘನ್ ನ ಉಗ್ರರು
ಕಾಬೂಲ್/ಬೀಜಿಂಗ್: ಆತಂಕಕಾರಿ ಬೆಳವಣಿಗೆ ಎಂಬಂತೆ, ಅಮೆರಿಕ ಸೇನಾ ಪಡೆಯ ವಾಪಸಾತಿ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಕಾಲೂರಲು ಪ್ರಯತ್ನಿಸುತ್ತಿರುವ ಚೀನಾಗೆ ತಾಲಿಬಾನ್ ಕೆಂಪುಹಾಸಿನ ಸ್ವಾಗತ ಕೋರಿದೆ. “ಚೀನಾವನ್ನು ನಾವು ಅಫ್ಘನ್ನ ಸ್ನೇಹಿತನೆಂದು ಪರಿಗಣಿಸುತ್ತೇವೆ. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯೂರ್ ಇಸ್ಲಾಮಿಕ್ ಉಗ್ರರಿಗೆ ನಾವು ಆಶ್ರಯ ನೀಡುವುದಿಲ್ಲ’ ಎಂದು ತಾಲಿಬಾನ್ ಶನಿವಾರ ಭರವಸೆ ನೀಡಿದೆ.
ತಾಲಿಬಾನ್ ಆಡಳಿತದಡಿ, ಕ್ಸಿನ್ ಜಿಯಾಂಗ್ ನಲ್ಲಿ ಉಗ್ರವಾದವನ್ನು ಬಿತ್ತುತ್ತಿರುವ ಈಸ್ಟ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್ ಮೆಂಟ್ (ಇಟಿಐಎಂ) ಎಂಬ ಉಗ್ರ ಸಂಘಟನೆಗೆ ಅಫ್ಘಾನಿಸ್ತಾನವೇ ಸ್ವರ್ಗವಾಗಬಹುದು ಎಂಬ ಆತಂಕ ಚೀನಾಗಿತ್ತು. ಈಗ ಈ ಆತಂಕಕ್ಕೆ ಸ್ವತಃ ತಾಲಿಬಾನ್ ವಕ್ತಾರ ಸುಹೈನ್ ಶಹೀನ್ ತೆರೆ ಎಳೆದಿದ್ದಾನೆ. ನಮಗೆ ಚೀನಾ ಸ್ನೇಹಿತ. ಆದಷ್ಟು ಬೇಗ ಇಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಚೀನಾದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದೂ ಶಹೀನ್ ಹೇಳಿದ್ದಾನೆ. ಜತೆಗೆ, ಅಲ್ ಖೈದಾವಾಗಲೀ ಅಥವಾ ಬೇರೆ ಉಗ್ರ ಸಂಘಟನೆಯಾಗಲೀ ಅಫ್ಘನ್ ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾನೆ.